ಗ್ಯಾಡೊಲಿನ್, ಯೋಹಾನ್ -
	1760 - 1852. ಫಿನ್‍ಲೆಂಡಿನ ರಸಾಯನ ವಿಜ್ಞಾನಿ. ಅಬೊನಲ್ಲಿ 1760 ಜೂನ್ 5 ರಂದು ಜನನ. ಅಬೊ ಮತ್ತು ಉಪ್ಸಲಾ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ. ರಸಾಯನಶಾಸ್ತ್ರವನ್ನು ಟಾವರ್ನ್ ಒಲೊಫ್ ಬರ್ಗ್‍ಮನ್ ಎಂಬಾತನಲ್ಲಿ ಅಭ್ಯಾಸ ಮಾಡಿ ಬಳಿಕ ಅಬೊ ವಿಶ್ವವಿದ್ಯಾಲಯದಲ್ಲಿ ರಸಾಯನ ವಿಜ್ಞಾನದ ಪ್ರಾಧ್ಯಾಪಕನಾಗಿ 1797 ರಿಂದ 1822 ರವರೆಗೆ ಸೇವೆ ಸಲ್ಲಿಸಿದ. ಲೋಹ ಮತ್ತು ಖನಿಜಗಳ ಸಂಶೋಧನೆ ಈತನ ಪ್ರಮುಖಾಸಕ್ತಿ. ಸ್ಟಾಕ್‍ಹೋಮ್ ಬಳಿಯ ಇಟರ್ಬಿಯಲ್ಲಿ ದೊರೆತ (1794) ಒಂದು ಗಟ್ಟಿಯಾದ ಕಪ್ಪು ಕಲ್ಲಿನಲ್ಲಿ ವಿರಳ ಭಸ್ಮಧಾತುಗಳನ್ನು ಕಂಡುಹಿಡಿದ ಕೀರ್ತಿ ಈತನದು. ಇವುಗಳ ಪೈಕಿ ಈತ ಆವಿಷ್ಕರಿಸಿದ ಲೋಹಕ್ಕೆ ಇಟ್ರಿಯಮ್ ಎಂಬ ಹೆಸರಿಟ್ಟ. ಈ ಲೋಹಗಳ ಖನಿಜಕ್ಕೆ ಗ್ಯಾಡೊಲಿನ್ನನ ಗೌರವಾರ್ಥವಾಗಿ ಇಂದು ಗ್ಯಾಡೊಲಿನೈಟ್ ಎಂದೇ ಹೆಸರಾಗಿದೆ. ಗ್ಯಾಡೊಲಿನ್ ವಿರಳ ಭಸ್ಮಧಾತುಗಳ ಬಗ್ಗೆ ಹೆಚ್ಚು ಸಂಶೋಧನೆ ಮಾಡಿ ಹೆಸರು ಪಡೆದರೂ ಅವನು ರಸಾಯನ ಶಾಸ್ತ್ರದ ಇತರ ಭಾಗಗಳಾದ ಸಂಯೋಗ ದ್ರವ್ಯಸಂಬಂಧತೆ (ಸ್ಟಾಯ್‍ಕಿಯೊಮೆಟ್ರ), ಉಷ್ಣ ರಸಾಯನಶಾಸ್ತ್ರ ಹಾಗೂ ಕಬ್ಬಿಣದ ಅದುರುಗಳನ್ನು ವಿಭಜಿಸುವ ಸಲುವಾಗಿ ಸ್ರಾವಕಗಳ ಶೋಧನೆಯಲ್ಲೂ ಆಸಕ್ತನಾಗಿದ್ದ. 1852 ರ ಅಗಸ್ಟ್ 15 ರಂದು ಗ್ಯಾಡೊಲಿನ್ ಮೃತನಾದ.
(ಪಿ.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ